ಕ್ರಿ.ಶ.950 ರಲ್ಲಿ ಸ್ಥಾಪನೆಯಾದ ಆತಕೂರು ಶಾಸನವು, ಕನ್ನಡಭಾಷೆಯ ಶಾಸನಗಳ ಸಮುದಾಯದಲ್ಲಿಯೇ ಆನನ್ಯವಾದುದು.
                                            ಅದು ದಕ್ಷಿಣ ಕರ್ನಾಟಕದ ಮಂಡ್ಯ ಜಿಲ್ಲೆಯ ಆತಕೂರು ಎಂಬ ಹಳ್ಳಿಯಲ್ಲಿ ದೊರಕಿತು. ಈಗ ಅದನ್ನು ಬೆಂಗಳೂರಿನ
                                            ಸರ್ಕಾರೀ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಈ ಶಾಸನವನ್ನು ರಾಷ್ಟ್ರಕೂಟ ರಾಜವಂಶಕ್ಕೆ ಸೇರಿದ
                                            ಕನ್ನರದೇವನ (ಮೂರನೆಯ ಕೃಷ್ಣ) ಆಳ್ವಿಕೆಯಲ್ಲಿ ಸ್ಥಾಪಿಸಲಾಯಿತು. ಕಾಳಿ ಎಂಬ ನಾಯಿಯ ಪರಾಕ್ರಮವನ್ನು
                                            ಪ್ರಶಂಸೆ ಮಾಡುವ ದಾಖಲೆ, ಎನ್ನುವುದು ಇದರ ವಿಶೇಷ.
                                    
                                    
                                        ಬೂತುಗನೆಂಬ ರಾಜನು, ಮನಲಾರ ಎನ್ನುವವನ ನೆರವಿನಿಂದ ಚೋಳ ರಾಜನಾದ
                                            ರಾಜಾದಿತ್ಯನನ್ನು ಕೊಲ್ಲುತ್ತಾನೆ. ಕೃತಜ್ಞನಾದ ರಾಜನು, ಮನಲಾರನಿಗೆ ಅವನು ಬಯಸಿದ ವಸ್ತುವನ್ನು ನೀಡುವ
                                            ಆಶ್ವಾಸನೆ ಕೊಡುತ್ತಾನೆ. ಮನಲಾರನು ತನ್ನ ಪರಾಕ್ರಮಕ್ಕೆ ಪ್ರತಿಯಾಗಿ ಕಾಳಿ ಎಂಬ ನಾಯಿಯನ್ನು ಕೊಡಬೇಕೆಂದು
                                            ಕೇಳಿಕೊಳ್ಳುತ್ತಾನೆ. ರಾಜನು ಅವನ ಕೋರಿಕೆಯನ್ನು ಈಡೇರಿಸುತ್ತಾನೆ. ಸ್ವಲ್ಪ ಕಾಲದ ನಂತರ ಕಾಳಿಯು ಕಾಡುಹಂದಿಯ
                                            ಸಂಗಡ ಹೋರಾಡುವಾಗ ಸತ್ತುಹೋಗುತ್ತದೆ. ಮನಲಾರನಿಗೆ ಬಹಳ ದುಃಖವಾಗುತ್ತದೆ.
                                    
                                    
                                        ಕಾಳಿಯ ಪರಾಕ್ರಮ ಮತ್ತು ನಿಷ್ಠೆಗಳ ಸ್ಮಾರಕವಾಗಿ, ಮನಲಾರನು ಒಂದು
                                            ವೀರಗಲ್ಲನ್ನು ನಿಲ್ಲಿಸುತ್ತಾನೆ. ಅದರಲ್ಲಿ ಆ ಹೋರಾಟದ ಪ್ರಸ್ತಾಪವಿದೆ. ಆ ಸ್ಥಳದಲ್ಲಿ ಎಡೆಬಿಡದೆ
                                            ಪೂಜೆಗಳನ್ನು ನಡೆಸಲು ಅಗತ್ಯವಾದ ದತ್ತಿಯನ್ನು ಕೂಡ ಮನಲಾರನು ನೀಡುತ್ತಾನೆ. 
                                    
                                    
                                        ಈ ಶಾಸನವು ಬೂತುಗನು ಮನಲಾರನಿಗೆ ನೀಡಿದ ಕೊಡುಗೆಗಳನ್ನೂ ಅಂತಯೇ
                                            ಮನಲಾರನು ಆ ವೀರಗಲ್ಲಿನ ಸಂರಕ್ಷಣೆಗೆಂದು ನೀಡಿದ ದಾನಗಳನ್ನೂ ನಿರೂಪಿಸುತ್ತದೆ. ಒಂದು ನಾಯಿಯನ್ನು
                                            ಗೌರವಿಸಲೆಂದು ಶಾಸನವನ್ನೇ ನಿರ್ಮಿಸಿದ ಈ ಘಟನೆಯು, ರಾಷ್ಟ್ರಕೂಟರು ಮತ್ತು ಚೋಳರ ನಡುವೆ ಇನ್ನೊಂದು
                                            ಯುದ್ಧಕ್ಕೆ ಕಾರಣವಾಗುತ್ತದೆ.
                                    
                                    
                                        ಶಾಸನದ ಪೂರ್ಣಪಾಠ
                                        
                                    
                                    
                                        ಸ್ವ ಸ(ಶ)ಕ[ನೃಪ ಕಾಲಾತೀತ ಸಂವತ್ಸರ ಸ(ಶ)ತಙ್ಗಳ್ ಎಣ್ಟುನೂಱ್
                                            ಎೞ್ಪತ್ತೆರಡನೆಯ ಶೌ(ಸೌ)ಮ್ಯಮ್ ಎಂಬ ಸಂವತ್ಸರಮ್ ಪ್ರವರ್ತ್ತಿಸೆ ಸ್ವಸ್ತಿ ಅಮೋಘವರಿಷದೇವ ಶ್ರೀಪೃಥುವಿವಲ್ಲs ಪರಮೇಶ್ವರ ಪರಮ
                                                    ಭಟ್ಟಾರಕ ಪಾದಪಂಕಜಭ್ರಮರಂ ನೃಪತ್ರಿಣೇತ್ರನ್ ಆನೆವೆಡಂಗಂ ವನಗಜಮಲ್ಲಂ ಕಚ್ಚೆಗಂ ಕ್ರಿ(ಕೃ)ಷ್ಣರಾಜಂ
                                                    ಶ್ರೀಮತ್ ಕನ್ನರದೇವಂ..... ೞು(?)
                                        ವಜಂ ಚೋಳರಾಜಾದಿತ್ಯನ ಮೇಲೆ [ಬ]ನ್ದು ತಕ್ಕೋಲಡೊಳ್ ಕಾದಿ
                                            ಕೊಂದು ಬಿಜಯಂ ಗೆಯ್ಯುತ್ತಿೞ್ದು ಸ್ವ[ಸ್ತ] [ಸ]ತ್ಯವಾಕ್ಯ ಕೊಂಗುಣಿವರ್ಮ್ಮ ಧರ್ಮ್ಮಮಹಾರಾಜಾಧಿರಾಜಂ
                                            ಕೋಳಾಲಪುರವರೇಶ್ವರಂ ನನ್ದಗಿರಿನಾಥಂ ಶ್ರೀಮತ್ ಪೆರ್ಮ್ಮಾನಡಿಗಳ್ ನನೆಯಗಂಗ ಜಯ[ದ್ ಉ]ತ್ತರಂಗ ಗಂಗ
                                            [ಗಾಂ]ಗೇಯ ಗಂಗ ನಾರಾಯಣ ತನ್ ಆಳು ಸ್ವಸ್ತಿ ಸಕಲಲೋಕ ಪರಿತಾಪವಿಹತ [ಪ್ರ]ಭಾವತಾರಿ[ತ] ಗಂಗ ಪ್ರಭಾವೋದರ
                                            ಸಾಗರವಂಶ ವಳಭಿಪುರವರೇಶ್ವರನ್ ಉದಾರ ಭಗೀರಥನ್ ಇಱವಬೆಡೆಂUಂ ಸಾ[ಗರ] ತ್ರಿಣೇತ್ರಂ ಸೆಣಸೆ ಮೂಗರಿವೊಂ ಕದನೈಕ ಸೂ(ಶೂ)ದ್ರಕಂ
                                                ಬೂತುಗನ್ ಅಂಕಕಾರಂ ಶ್ರೀಮತ್ ಮಣಲತರತ[ಂಗ]ನುವರದೊಳ ಮೆಚ್ಚಿ ಬೇಡಿಕೊಳ್ಳ್ ಎನ್ದೊಡೆ ದಯೆಯ ಮೆಱೆವೊ(ಳ್)
                                                ಎಂಬ ಕಾಳಿಯಂ ದಯೆಗೆಯ್ಯ್ ಎಂದು ಕೊಣ್ಡನಾ ನಾಯ[ಂ] ಕೇೞಲೆನಾಡ ಬೆಳತೂರ ಪಡುವಣ ದೆಸೆಯ ಮೊಱದಿಯೊಳ್ ಪಿರಿ[ದು
                                                ಪ]ಂಡಿಗೆ ವಿಟ್ಟೊಡೆ ಪಂಡಿಯುಂ ನಾಯುಂ ಒಡ ಸತ್ತುವದರ್ಕ್ಕೆಯ್ ಅತ್ತುಕೂರೊಳ್ ಚಲ್ಲೇಶ್ವರದ ಮುಂದೆ ಕಲ್ಲನ್
                                                ನಡಿಸಿ ಪಿರಿಯ ಕೆಱೆಯ ಕೆಳಗೆ ಮಳ್ತಿಕಾಳಂಗದೊಳ್ ಇರ್ಕ್ಕ(ರ್ಖ)ಂಡುಗ ಮಣ್ಣ[ಂ] ಕೊಟ್ಟರ್ ಆ ಮಣ್ಣನ್
                                                ಒಕ್ಕಲ್ ನಾಡನ್ ಆಳ್ವ್ವೆಂನ್ ಊರನ ಆಳ್ವೊರ್ ಈ ಮಣ್ಣನ್ ಅೞದೊನ್ ಆ ನಾಯ ಗೆಯ್ದ ಪಾಪಮ[ಂ] ಕೊಂಡೊಂನ್
                                                ಆ ಸ್ಥಾನಮನ್ ಆಳ್ವ ಗೊರವನ್ ಆ ಕಲ್ಲಂ ಪೂಜಿಸದ್ ಉಣ್ಡರ್ ಅಪ್ಪೊಡೆ ನಾಯ ಗೆಯ್ದ ಪಾಪಮಂ ಕೊಣ್ಡ[ನ್]
                                                ಓಂ ಊಱದ್ ಇದಿರಾಂತ ಚೋಳ ಚತುರಂಗಬಲಂಗಳನ್ ಅಟ್ಟಿ ಮುಟ್ಟಿ ತಳ್ತ್ ಇಱವೆಡೆಗ ಓರ್ವರ್ ಅಪ್ಪೊಡಂ ಇದಿರ್ಚ್ಚುವ
                                                ಗಣ್ಡರನ್ ಆಂಪೆವ್ ಎನ್ದು ಪೊಟ್ಟಾಳಿಸುವ ಬೀ(ವೀ)ರರಂ ನೆಱೆಯೆ ಕೋಣೆ(ಣ)ಮೆ ಚೋಳನೆ ಸ(ಶ)ಕ್ತಿಯಾಗೆ ತಳ್ತ್
                                                ಇಱದುದನ್ ಆವೆ(ಮೆ) ಕಂಣ್ಡೆವ ಎನೆ ಮೆಚ್ಚದೊರ್ ಆರ್ ಸ್ಸಾಗರ ತ್ರಣೇತ್ರಂ ನರಪತಿ ಬೆನ್ನೊಳ್ ಇೞದೊನ್
                                                ಇದಿರ್ ಆಂತುದು ವೈರಿಸಮೂದಂ ಇಲ್ಲಿ ಮಚ್ಚರಿಸುವರ್ ಎಲ್ಲರುಂ ಸೆರಗುವಾಳ್ದಪೋರ್ ಇಂತಿರೆನ್ ಎನ್ದು ಸಿಂಗದ್
                                                ಅಂತಿರೆ ಹರಿ ಬೀ(ವೀ)ರಲಕ್ಷ್ಮಿ ನೆರವಾಗಿರೆ ಚೋೞ[] ಕೋಟೆಯ್ ಎಂಬ ಸಿಂಧುರದ ಶಿರಾಗ್ರಮಂ ಬಿರಿಯೆ ಪಾಯಿದಂ
                                                ಕಂದನೈಕ ಸೂ(ಶೂ)ದ್ರಕಂ ಓಂ ಸ್ವಸ್ತಿ ಶ್ರೀ ಎಱೆಯಪನ ಮಗಂ ರಾಚಮಲ್ಲನಂ ಬೂತುಗಂ ಕಾದಿ ಕೊನ್ದು ತೊಂಬತ್ತಱು
                                                ಸಾಸಿರಮುಮಂ ಆಳುತ್ತಿರೆ ಕನ್ನರದೇವ[ಂ] ಚೋಳನಂ ಕಾದುವನ್ದು ಬೂತುಗಂ ರಜಾದಿತ್ಯನಂ ಬಿಸುಗೆಯೆ ಕಳ್ಳನಾಗಿ
                                                ಗುರಿಗ್ ಇಱದು ಕಾದಿ ಕೊಂದು ಬನವಸೆ ಪನಿಚ್ನಾರ್ಛಾಸಿರಮುಂ ಬೆಳ್ವೊಲ ಮೂನೂರುಂ ಪುರಿಗೆಱೆ ಕಿಸುಕಾಡ್
                                                ಎಳ್ಪತ್ತುಂ ಬಾಘೆನಾಡ್ ಎಳ್ಪತ್ತುವ(ಮ)ಂ ಬೂತುಗಂಗೆ ಕನ್ನರದೇವಂ ಮೆಚ್ಚುಗೊಟ್ಟಂ ಬೂತುಗನುಂ ಮಣಲರತನ
                                                ಮುಂದೆ ನಿಂದ ಇಱದುದರ್ಕ್ಕೆ ಮೆಚ್ಚಿ ಆತುಕೂರ್ ಪನ್ನೆರಡುಂ ಬೆಳ್ವೊಲದ ಕೋಟೆಯೂರುಮಂ ಬಾಳ್ಗ[ಂ] [ಮೆ]ಚ್ಚುಗೊಟ್ಟಂ
                                                ಮಙ್ಗಳ ಮಹಾಶ್ರೀ